ಔದ್ಯೋಗಿಕ ಮಾರ್ಗದರ್ಶನ: ಬೇರೆ ಬೇರೆ ವೃತ್ತಿಗಳಲ್ಲಿ ಇರುವ ಉದ್ಯೋಗಾವಕಾಶ, ಆಯಾ ವೃತ್ತಿಗೆ ಅಗತ್ಯವಾಗುವ ಸಾಮಥರ್ಯ್‌, ಕೌಶಲ್ಯ, ಮೊದಲಾದ ಅರ್ಹತೆ, ಅದಕ್ಕಾಗಿ ಸಮಾಜ ಅಥವಾ ರಾಷ್ಟ್ರ ವ್ಯವಸ್ಥೆಗೊಳಿಸಿರುವ ತರಬೇತಿ ಕಾರ್ಯಕ್ರಮ ಇತ್ಯಾದಿ ವಿವರಗಳನ್ನು ನೀಡಿ, ವ್ಯಕ್ತಿ ಉದ್ಯೋಗ ದೊರಕಿಸಿಕೊಳ್ಳಲು ನೇರವಾಗಿ, ಅನಂತರ ಆ ಕೆಲಸದಲ್ಲಿ ಹೊಂದಿಕೊಳ್ಳಲು ನೀಡುವ ಸಲಹಾ ಸಹಾಯ (ವೊಕೇಷನಲ್ ಗೈಡೆನ್ಸ್‌). ಇದು ಶೈಕ್ಷಣಿಕ ಮಾರ್ಗದರ್ಶನದ ಒಂದು ವಿಶಿಷ್ಟ ಮುಖವಾಗಿದ್ದು ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ವ್ಯವಸ್ಥೆಗೊಳಿಸಬಹುದಾದ ಕಾರ್ಯಕ್ರಮವಾಗಿದೆ. ತಂದೆತಾಯಿಗಳು, ನೆಂಟರಿಷ್ಟರು, ಸ್ನೇಹಿತರು, ಸಮಾಜ, ರಾಷ್ಟ್ರ-ಇವೆಲ್ಲ ಮೂಲಗಳಿಂದಲೂ ಮಾರ್ಗದರ್ಶನ ದೊರಕಬಹುದಾದರೂ ಶಾಲಾಕಾಲೇಜುಗಳು ಇದನ್ನೊಂದು ನಿರ್ದಿಷ್ಟವೂ ವ್ಯವಸ್ಥಿತ ರೀತಿಯದೂ ಆದ ಸೇವಾಸೌಲಭ್ಯವನ್ನಾಗಿ ಏರ್ಪಡಿಸಿಕೊಂಡಿವೆ. ವಿದ್ಯಾರ್ಥಿಗಳು ತಮ್ಮ ಶಕ್ತಿ ಸಾಮಥರ್ಯ್‌ಗಳನ್ನು ಪರಿಪುರ್ಣವಾಗಿ ಬೆಳೆಸಿಕೊಂಡು ತಮ್ಮ ಅಗತ್ಯವನ್ನೂ ಆಶೋತ್ತರಗಳನ್ನೂ ಪುರೈಸಿಕೊಳ್ಳುವಂತೆ ನೆರವಾಗುವುದೇ ಇದರ ಉದ್ದೇಶ. ವ್ಯಕ್ತಿಯ ಅಭಿರುಚಿ ಆಸಕ್ತಿಗಳನ್ನು ನಿರ್ಧರಿಸಿ, ಅವುಗಳ ಆಧಾರದ ಮೇಲೆ, ವ್ಯಕ್ತಿ ತನಗೆ ಯುಕ್ತನಾದ ಉದ್ಯೋಗವೊಂದನ್ನು ಆರಿಸಿಕೊಳ್ಳಲು ನೆರವಾಗುವ ಈ ಸೇವಾಕಾರ್ಯದಲ್ಲಿ ಶಾಸ್ತ್ರೀಯ ವಿಧಾನವನ್ನು ಅನುಸರಿಸಲಾಗುವುದು. ಈ ಕಾರ್ಯದಲ್ಲಿ ಸಂಚಿತಾಭಿವೃದ್ಧಿ ದಾಖಲೆ, ಪ್ರಶ್ನಾವಳಿ, ಆಸಕ್ತಿಸೂಚಿ, ವೈಯಕ್ತಿಕ ಅಥವಾ ಸಾಮೂಹಿಕ ಭೇಟಿ. ಮನೋಭಾವ ಮಾಪಕ, ಪ್ರಮಾಣೀಕರಿಸಿದ ಶಿಕ್ಷಣಾಭಿವೃದ್ಧಿ ಪರೀಕ್ಷಣಗಳು. ಸಾಮಥರ್ಯ್‌ ಪರೀಕ್ಷಣ, ಕೌಶಲ್ಯ ಪರೀಕ್ಷಣ-ಇತ್ಯಾದಿ ಉಪಕರಣಗಳನ್ನು ಬಳಸಲಾಗುವುದು. ಆ ಮೂಲಕ ಸಂಗ್ರಹಿಸುವ ಆಧಾರಾಂಶವನ್ನು ಬಳಸಿಕೊಂಡು ಯುಕ್ತ ರೀತಿಯ ಮಾರ್ಗದರ್ಶನ ನೀಡಲಾಗುವುದು. ಹಾಗೆ ನೀಡುವ ಸಲಹೆ ಎಷ್ಟರಮಟ್ಟಿಗೆ ಫಲಕಾರಿಯಾಗಿದೆ, ಎಷ್ಟರಮಟ್ಟಿಗೆ ವ್ಯಕ್ತಿ ತನ್ನ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸುವಂತೆ ಮಾಡಿದೆ ಎಂಬುದನ್ನು ಅರಿತುಕೊಳ್ಳಲು ಅನಂತರವೂ ಅನುವರ್ತಿ (ಫಾಲೋ ಆಪ್) ಪರೀಕ್ಷೆಯನ್ನು ನಡೆಸಲಾಗುವುದು.
ಇತಿಹಾಸ: ತಂದೆತಾಯಿಗಳೂ ಬಂಧುಬಳಗದವರೂ ವ್ಯಕ್ತಿಗೆ ತಾನು ಅನುಸರಿಸಬೇಕಾದ ಉದ್ಯೋಗದ ಬಗ್ಗೆ ಮಾರ್ಗದರ್ಶನ ನೀಡುವುದು ಪ್ರಾಚೀನಕಾಲದಿಂದ ನಡೆದು ಬಂದಿದ್ದರೂ ಅದಕ್ಕೊಂದು ಶಾಸ್ತ್ರೀಯ ವಿಧಾನ ಆರಂಭವಾಗಿ ತಾಂತ್ರ್ರಿಕ ಚೌಕಟ್ಟು, ದೊರತದ್ದು ಈ ಶತಮಾನದ ಆರಂಭದಿಂದ ಮಾತ್ರ. ಒಂದನೆಯ ಮಹಾಯುದ್ಧಕಾಲದಲ್ಲಿ, ವ್ಯಕ್ತಿಗೆ ಅವನ ಶಕ್ತಿಸಾಮಥರ್ಯ್‌ಗಳಿಗೊಪ್ಪುವಂಥ ಕಾರ್ಯವನ್ನು ವಹಿಸುವುದು ವ್ಯಕ್ತಿಯ ಮತ್ತು ಸಮಾಜದ ಹಿತದೃಷ್ಟಿಗಳೆರಡರಲ್ಲೂ ಎಷ್ಟು ಮುಖ್ಯವೆಂಬುದು ವ್ಯಕ್ತಪಟ್ಟಿತು. ಮನೋವೈಜ್ಞಾನಿಕ ಪರೀಕ್ಷಣಗಳ ಫಲಿತಾಂಶಗಳ ಆಧಾರದ ಮೇಲೆ ಅಮೆರಿಕದ ಸೈನಿಕರಿಗೆ ಯುದ್ಧಕ್ಷೇತ್ರದಲ್ಲಿ ಅವರವರಿಗೊಪ್ಪುವ ಕಾರ್ಯವನ್ನು ವಹಿಸಿ ಅದು ಫಲಕಾರಿಯಾದುದೇ ಆಧುನಿಕ ಔದ್ಯೋಗಿಕ ಮಾರ್ಗದರ್ಶನದ ಇತಿಹಾಸ ಆರಂಭವಾಯಿತೆನ್ನಬಹುದು. 1920ರ ವೇಳೆಗೆ ಪ್ರತಿ ವ್ಯಕ್ತಿಯೂ ನಿರ್ದಿಷ್ಟ ವೃತ್ತಿಯೊಂದನ್ನನುಸರಿಸುವುದು ಸಾಧ್ಯವೆಂಬ ಭಾವನೆ ಬೆಳೆದು, ಮೊದಮೊದಲು ವ್ಯಕ್ತಿಯ ಬುದ್ಧಿಶಕ್ತಿ ಮತ್ತು ಕೌಶಲ್ಯಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಮಾರ್ಗದರ್ಶನ ನೀಡುವ ಕಾರ್ಯ ಆರಂಭವಾಯಿತು. ಆಗ ನೀಡಿದ ಸಲಹೆಗಳು ಅನೇಕ ವೇಳೆ ವಿಫಲವಾಗುತ್ತಿದ್ದು ಕಂಡ ಮನೋವಿಜ್ಞಾನಿಗಳು ಆ ಕಾರ್ಯದಲ್ಲಿ ಇತರ ಅಂಶಗಳ ಪರಿಗಣನೆಯೂ ಅಗತ್ಯವೆಂಬುದನ್ನು ಕಂಡುಕೊಂಡರು. ಬುದ್ಧಿಶಕ್ತಿ ಕೌಶಲ್ಯಗಳಂತೆ ವ್ಯಕ್ತಿಯ ಪ್ರೇರಣೆ, ಚಿತ್ತಪ್ರವೃತ್ತಿ, ಇತ್ಯಾದಿ ಅಂಶಗಳೂ ವ್ಯಕ್ತಿಯ ಕಾರ್ಯನಿರ್ವಹಣಾ ಸಾಮಥರ್ಯ್‌ಕ್ಕೆ ಕಾರಣವೆಂಬುದನ್ನು ಸಂಶೋಧನೆಗಳು ಸೂಚಿಸಿದುವು. ಜೊತೆಗೆ, ವೃತ್ತಿಗಳ ಸ್ವರೂಪದಲ್ಲಿ ತೀವ್ರವೇಗದ ಬದಲಾವಣೆಗಳಾಗುತ್ತಿರುವ ಈ ಕಾಲದಲ್ಲಿ ವ್ಯಕ್ತಿಗೆ ಸಂಕುಚಿತ ಕ್ಷೇತ್ರದ ಒಂದು ನಿರ್ದಿಷ್ಟ ವೃತ್ತಿಯನ್ನನುಸರಿಸುವಂತೆ ಸಲಹೆ ನೀಡುವುದು ಸೂಕ್ತವಾಗದೆಂಬ ಅಂಶವೂ ವ್ಯಕ್ತಪಟ್ಟಿತು; ಅಲ್ಲದೆ, ತೀರ ಚಿಕ್ಕ ವಯಸ್ಸಿನಲ್ಲೇ ನಿರ್ದಿಷ್ಟ ವೃತ್ತಿಯೊಂದಕ್ಕೆ ವ್ಯಕ್ತಿಯನ್ನು ಕಟ್ಟಿಹಾಕುವುದು ಅಪಾಯಕಾರಿಯೆಂಬ ಅಂಶವೂ ಗಮನಕ್ಕೆ ಬಂತು. ಇವೆಲ್ಲದರ ಫಲವಾಗಿ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿದ್ದ ಔದ್ಯೋಗಿಕ ಮಾರ್ಗದರ್ಶನವನ್ನು ಶೈಕ್ಷಣಿಕ ಮಾರ್ಗದರ್ಶನದ ಒಂದು ಅಂಗವಾಗಿ ಪರಿಗಣಿಸಿ, ವ್ಯಕ್ತಿಯ ಸಂಪ್ರದಾಯ ಆರಂಭವಾಯಿತು. 1920ರ ಆನಂತರ ಈ ಕಾರ್ಯಕ್ಕಾಗಿ ವಿವಿಧ ಉಪಕರಣಗಳನ್ನು ರೂಢಿಸುವ ಯತ್ನ ನಡೆಯಿತು. ಈ ಕಾರ್ಯ ಮುಖ್ಯವಾಗಿ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಆರಂಭವಾಯಿತು. ರಾಷ್ಟ್ರದ ರಕ್ಷಣೆಯ ದೃಷ್ಟಿಯಿಂದಲ್ಲದೆ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ನೆಮ್ಮದಿಯ ದೃಷ್ಟಿಯಿಂದಲೂ ಔದ್ಯೋಗಿಕ ಮಾರ್ಗದರ್ಶನ ಬಹುಮುಖ್ಯ ಕಾರ್ಯಕ್ರಮವೆಂದು ಪರಿಗಣಿಸಿ ಆ ಕಾರ್ಯಕ್ಕಾಗಿ ಅಗತ್ಯವಾದ ಧನಸಹಾಯವನ್ನು ಸರ್ಕಾರ ಒದಗಿಸಿತು. ಶೈಕ್ಷಣಿಕ ಮಾರ್ಗದರ್ಶನ ಪ್ರೌಢಶಾಲೆಗಳಲ್ಲೂ ಕಾಲೇಜುಗಳಲ್ಲೂ ಬಹುಬೇಗ ಜನಪ್ರಿಯವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲೂ ಅನಂತರವೂ ಈ ಸೌಲಭ್ಯವನ್ನು ಸೈನಿಕರಿಗೆ ಕೆಲಸಗಳನ್ನು ಹಂಚುವಾಗ ಬಳಸಿಕೊಂಡು ಪ್ರಚಾರಕ್ಕೆ ತರಲಾಯಿತು. 1960ರ ವೇಳೆಗೆ ನಗರಗಳ ಪ್ರತಿ ಪ್ರೌಢಶಾಲೆಗೂ ಒಬ್ಬೊಬ್ಬ ಮಾರ್ಗದರ್ಶನ ತಜ್ಞರನ್ನು ನೇಮಿಸಿಕೊಳ್ಳಲಾಯಿತು. ಈಚೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಅವರಿಗೆ ಉದ್ಯೋಗವೊದಗಿಸುವ ಕಾರ್ಯವನ್ನೂ ಈ ಸೇವಾಸೌಲಭ್ಯದ ಅಂಗವಾಗಿ ಕೈಗೊಳ್ಳಲಾಗುತ್ತದೆ. ಅಲ್ಲಿ ಅಂದಿಗಾಗಲೆ ಅಸ್ತಿತ್ವಕ್ಕೆ ಬಂದಿದ್ದ ಉದ್ಯೋಗ ವಿನಿಮಯ ಕಚೇರಿ, ತರಬೇತಿ, ಮರುತರಬೇತಿ ಮತ್ತು ಸಲಹಾ ಕಚೇರಿಗಳು, ಪುನರ್ವಸತೀಕರಣ ಸಂಸ್ಥೆ. ಔದ್ಯೋಗಿಕ ಸಿಬ್ಬಂದಿಯ ಕಚೇರಿ ಇತ್ಯಾದಿ ಸಾರ್ವಜನಿಕ ಸಂಸ್ಥೆಗಳೂ ಯುವಜನರಿಗೆ ತಕ್ಕಮಟ್ಟಿಗೆ ಔದ್ಯೋಗಿಕ ಮಾರ್ಗದರ್ಶನವನ್ನು ಈಗ ನೀಡುತ್ತಿವೆ; ಸ್ವಲ್ಪಮಟ್ಟಿಗೆ ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಅವು ಮಾರ್ಗದರ್ಶನ ನೀಡುತ್ತವೆ. ಏಕೆಂದರೆ, ಔದ್ಯೋಗಿಕ ಜೀವನದ ಯಶಸ್ಸು ಮತ್ತು ನೆಮ್ಮದಿಗಳಿಗೂ ವೈಯಕ್ತಿಕ ಅಂಶಗಳಿಗೂ ನಿಕಟಸಂಬಂಧವಿದೆ. 

ಮೊದಮೊದಲು ಮಾರ್ಗದರ್ಶನ ಪ್ರೌಢಶಾಲೆಯನ್ನು ಮಧ್ಯೆ ಬಿಡುವವರಿಗೆ ಮಾತ್ರ ನೀಡಲಾಗಿತ್ತು. ಆಗ ಅವರನ್ನು ಸುಮ್ಮನೆ ಭೇಟಿ ಮಾಡಿ, ವೃತ್ತಿಯೊಂದರ ಅನುಸರಣೆಗೆ ಸ್ಥೂಲವಾಗಿ ಸಲಹೆ ನೀಡಲಾಗುತ್ತಿತ್ತು. 1930ರ ಆನಂತರ ಅದಕ್ಕಾಗಿ ಶಾಸ್ತ್ರೀಯ ರೀತಿಯ ಉಪಕರಣಗಳನ್ನು ಬಳಸಿಕೊಂಡು, ವ್ಯಕ್ತಿಯ ಯೋಗ್ಯತೆಗಳನ್ನು ನಿರ್ಧರಿಸಿ, ಅವನ್ನು ಉದ್ಯೋಗಗಳ ಆವಶ್ಯಕತೆಗಳೊಡನೆ ಸರಿಹೊಂದಿಸಿಕೊಂಡು ಸಲಹೆ ನೀಡಲಾಗುತ್ತಿದೆ. ಜೊತೆಗೆ, ಈಚೆಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಅದನ್ನು ವಿಸ್ತರಿಸಿದೆ. 

ಇಂಗ್ಲೆಂಡಿನಲ್ಲಿ ಹಾಗೂ ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಔದ್ಯೋಗಿಕ ಮಾರ್ಗದರ್ಶನ ಅಷ್ಟು ತಾಂತ್ರಿಕ ಸ್ವರೂಪವನ್ನು ತಾಳದಿದ್ದರೂ ಕಾರ್ಯರೂಪದಲ್ಲಿ ಫಲಕಾರಿಯಾಗುವಂತೆ ವ್ಯವಸ್ಥೆಗೊಂಡಿದೆ. ಪ್ರೌಢಶಾಲೆಗಳಲ್ಲೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೂ ಮುಖ್ಯೋಪಾಧ್ಯಾಯರೂ ಉದ್ಯೋಗಗಳ ಪ್ರತಿನಿಧಿಗಳೂ ವಿದ್ಯಾರ್ಥಿಗಳನ್ನು ಭೇಟಿಮಾಡಿ ಆಯಾ ಉದ್ಯೋಗಕ್ಕೆ ಸೂಕ್ತರಾದವರನ್ನು ಆರಿಸಿಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈ ಭೇಟಿಯಲ್ಲಿ ಪೋಷಕರೂ ಹಾಜರಿರುವುದುಂಟು. ಈಚೆಗೆ ಮನೋವೈಜ್ಞಾನಿಕ ಉಪಕರಣಗಳನ್ನೂ ಆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ವ್ಯಕ್ತಿಗಳಿಗೆ ಉದ್ಯೋಗಗಳನ್ನು ದೊರಕಿಸಿಕೊಡಲು ವ್ಯವಸ್ಥೆಗೊಂಡಿರುವ ಸಾರ್ವಜನಿಕ ಮತ್ತು ದೃಷ್ಟಿಯ ಉದ್ಯೋಗ ವಿನಿಮಯ ಸಂಸ್ಥೆಗಳೂ ಈ ಕಾರ್ಯವನ್ನೂ ತಕ್ಕಮಟ್ಟಿಗೆ ನಿರ್ವಹಿಸುತ್ತಿವೆ. 

ಮಾರ್ಗದರ್ಶನ ಒಂದು ತಾಂತ್ರಿಕ ಕಾರ್ಯ: ಔದ್ಯೋಗಿಕ ಮಾರ್ಗದರ್ಶನವನ್ನು ಶೈಕ್ಷಣಿಕ ಮಾರ್ಗದರ್ಶನದ ಅಂಗವಾಗಿಯೇ ನೀಡಲಿ, ಪ್ರತ್ಯೇಕವಾಗಿಯೇ ನೀಡಲಿ, ಅದನ್ನು ನೀಡತಕ್ಕವರು ಅಗತ್ಯವಾದ ತರಬೇತನ್ನೂ ನೈಪುಣ್ಯವನ್ನೂ ಹೊಂದಿರಬೇಕು. ಈಗಾಗಲೆ ಆ ಕಾರ್ಯದಲ್ಲಿ ಬಳಸಲು ರೂಪುಗೊಂಡಿರುವ ಶಾಸ್ತ್ರೀಯ ಉಪಕರಣಗಳ ಬಳಕೆ, ಅವು ದೊರಕಿಸುವ ವ್ಯಕ್ತಿಗೆ ಸಂಬಂಧಿಸಿದ ಆಧಾರಾಂಶಗಳ ವಿಶ್ಲೇಷಣೆ. ವಿವಿಧ ವೃತ್ತಿಗಳಿಗೆ ಅಗತ್ಯವಾಗುವ ಅರ್ಹತೆಗಳ ಪರಿಚಯ ಇವೆಲ್ಲ ಅಂಶಗಳ ಬೆಳಕಿನಲ್ಲಿ ವ್ಯಕ್ತಿಗೆ ಸಲಹೆ ನೀಡುವ ಕೌಶಲ್ಯ ಈ ಎಲ್ಲದರಲ್ಲೂ ಮಾರ್ಗದರ್ಶಕರು ಪಳಗಿರಬೇಕು; ಮನೋವಿಜ್ಞಾನದ ಪರಿಚಯ, ಆಧುನಿಕ ಸಮಾಜ ಜೀವನದಲ್ಲಿ ಉದ್ಯೋಗಾವಕಾಶ ದಲ್ಲಾಗುತ್ತಿರುವ ಬದಲಾವಣೆಗಳು. ವೃತ್ತಿ ವಿಶ್ಲೇಷಣದಿಂದ ಬೇರೆ ಬೇರೆ ವೃತ್ತಿಗಳಿಗೆ ಅಗತ್ಯವೆಂದು ನಿರ್ಧರಿಸಲಾಗಿರುವ ಕೌಶಲ್ಯಾದಿ ಅರ್ಹತೆಗಳು ಇತ್ಯಾದಿ ವಿವರಗಳನ್ನೂ ಅರಿತಿರಬೇಕು. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕಾದರೆ ಈ ಎಲ್ಲ ಪುರ್ವಸಿದ್ಧತೆಯೂ ಅಗತ್ಯ. ಮಾರ್ಗದರ್ಶನ ಇಷ್ಟು ಸಂಕೀರ್ಣವೂ ತಾಂತ್ರಿಕವೂ ಆದ ಕ್ರಿಯೆಯಾದ್ದರಿಂದ ಈಚೆಗೆ ಅನೇಕ ದೇಶಗಳಲ್ಲಿ ಅಧ್ಯಾಪಕರ ವೃತ್ತಿಶಿಕ್ಷಣ ಸಂಸ್ಥೆಗಳು ಅದನ್ನೊಂದು ಅಧ್ಯಯನ ವಿಷಯವನ್ನಾಗಿ ಗೊತ್ತುಮಾಡಿಕೊಂಡಿವೆ.

ಭಾರತದಲ್ಲಿ ಔದ್ಯೋಗಿಕ ಮಾರ್ಗದರ್ಶನ: ಭಾರತದಲ್ಲಿ ಎರಡನೆಯ ಮಹಾಯುದ್ಧದ ಆನಂತರ ನಿಧಾನವಾಗಿ ಪ್ರಚಾರಕ್ಕೆ ಬಂದ ಔದ್ಯೋಗಿಕ ಮಾರ್ಗದರ್ಶನ ಕೆಲವು ರಾಜ್ಯಗಳ ಪ್ರೌಢಶಾಲೆಗಳಲ್ಲಿ ಆಚರಣೆಗೆ ಬರಲಾರಂಭಿಸಿತು. 1953ರಲ್ಲಿ ಮೊದಲಿಯಾರ್ ಶಿಕ್ಷಣ ಆಯೋಗ ಆ ಬಗ್ಗೆ ನಿರ್ದಿಷ್ಟ ಸಲಹೆಯನ್ನು ಮಂಡಿಸಿತು. ಆ ಸಲಹೆಯನ್ನುಸರಿಸಿ 1954ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ದೆಹಲಿಯಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನದ ಕಾರ್ಯಾಲಯವನ್ನು ಆರಂಭಿಸಿತು; ಪ್ರತಿ ರಾಜ್ಯದಲ್ಲೂ ಒಂದೊಂದು ಮಾರ್ಗದರ್ಶನದ ಕಾರ್ಯಾಲಯಗಳು ಆರಂಭಿಸಲು ನೆರವು ನೀಡಿತು. ಈಗಾಗಲೆ ಅಂಥ ಕಾರ್ಯಾಲಯಗಳು ಅನೇಕ ರಾಜ್ಯಗಳಲ್ಲಿ ಆರಂಭವಾಗಿವೆ. ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಆರಂಭವಾಗಿರುವ ಈ ಸಂಸ್ಥೆಗಳು ಸುಶಿಕ್ಷಿತ ಮಾರ್ಗದರ್ಶಕರ ಮತ್ತು ವೃತ್ತಿತಜ್ಞರ ಸಹಾಯದಿಂದ ಪ್ರೌಢಶಾಲೆಗಳ ಬಾಲಕಬಾಲಕಿಯರಿಗೆ ವೃತ್ತಿಶಿಕ್ಷಣದಲ್ಲಿ ಮಾರ್ಗದರ್ಶನ ನೀಡುವ ಕಾರ್ಯವನ್ನು ತಕ್ಕಮಟ್ಟಿಗೆ ನಿರ್ವಹಿಸುತ್ತಿವೆ. ಈಗಾಗಲೆ ಸುಮಾರು ಸಾವಿರಾರು ಪ್ರೌಢಶಾಲೆಗಳಲ್ಲಿ ಈ ಕಾರ್ಯ ಆರಂಭವಾಗಿದೆ. ಆದರೆ ಸದ್ಯಕ್ಕೆ ಅಲ್ಲಿ ಅವರಿಗೆ ವೃತ್ತಗಳಿಗೆ ಸಂಬಂಧಿಸಿದ ವಿವರಗಳನ್ನು ಮಾತ್ರ ಒದಗಿಸುತ್ತಿರುವರು. ಎಲ್ಲೊ ಕೆಲವು ಪ್ರೌಢಶಾಲೆಗಳಲ್ಲಿ ಮಾತ್ರ ಪುರ್ಣಕಾಲದ ತರಬೇತು ಪಡೆದ ಮಾರ್ಗದರ್ಶಕರಿರುತ್ತಾರೆ. ಅಂಥ ಶಾಲೆಗಳಲ್ಲಿ ಮಾತ್ರ ಶಾಸ್ತ್ರೀಯ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಅವರವರು ಕೈಗೊಳ್ಳಬಹುದಾದ ವೃತ್ತಿಶಿಕ್ಷಣದ ಮತ್ತು ಉದ್ಯೋಗಗಳ ಬಗ್ಗೆ ಸಲಹೆ ನೀಡಲಾಗುತ್ತಿದೆ.

ಸು. 15 ವರ್ಷಗಳ ಹಿಂದೆ ಔದ್ಯೋಗಿಕ ಮಾರ್ಗದರ್ಶನದ ಬಗ್ಗೆ ನಿರ್ದಿಷ್ಟ ಯತ್ನ ಆರಂಭವಾಗಿದ್ದರೂ ಅದು ಅಷ್ಟು ಹುರುಪಿನಿಂದಾಗಲಿ ವ್ಯಾಪಕವಾಗಿಯಾಗಲಿ ನಡೆಯುತ್ತಿಲ್ಲ. ಇನ್ನೂ ಸು. 20,000 ಪ್ರೌಢಶಾಲೆಗಳಿಗೆ ಆ ಸೌಲಭ್ಯವನ್ನು ದೊರಕಿಸಬೇಕಾಗಿದೆ. ಜೊತೆಗೆ, ಶಾಲೆಯ ಸಾಮಾನ್ಯ ಅಧ್ಯಾಪಕರು ಅಷ್ಟಿಷ್ಟು ತರಬೇತು ಪಡೆದು ಹಾಗೂ ಹೀಗೂ ಆ ಕಾರ್ಯವನ್ನು ಅನೇಕ ಶಾಲೆಗಳಲ್ಲಿ ನಡೆಸುತ್ತಿದ್ದಾರೆ. ಅಲ್ಲದೆ, ಆ ಕಾರ್ಯಕ್ಕೆ ಅಗತ್ಯವಾಗುವ ವಿವಿಧ ಪರೀಕ್ಷೋಪಕರಣಗಳೂ ಸಿದ್ಧವಾಗಿಲ್ಲ. ಇದರ ಫಲವಾಗಿ ಔದ್ಯೋಗಿಕ ಮಾರ್ಗದರ್ಶನ ತಕ್ಕಷ್ಟೂ ಪ್ರತಿಫಲ ನೀಡುತ್ತಿಲ್ಲವೆಂದೇ ಹೇಳಬೇಕಾಗುತ್ತದೆ.

ಪ್ರತಿ ಪ್ರೌಢಶಾಲೆಗೂ ಪುರ್ಣಾವಧಿಯ ತರಬೇತು ಪಡೆದ ಒಬ್ಬೊಬ್ಬ ಮಾರ್ಗದರ್ಶಕನನ್ನು ನೇಮಿಸಿಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಮಾರ್ಗದರ್ಶನದ ಸೇವಾಸೌಲಭ್ಯವನ್ನು ಒದಗಿಸಬೇಕೆಂಬುದನ್ನು ಅಂತಿಮ ಉದ್ದೇಶವನ್ನಾಗಿ ಇಟ್ಟುಕೊಂಡಿದ್ದರೂ ಅದಕ್ಕೆ ಅಗತ್ಯವಾದ ಆರ್ಥಿಕ ಬೆಂಬಲ ದೊರಕುತ್ತಿಲ್ಲ; ಅಧಿಕ ಸಂಖ್ಯೆಯಲ್ಲಿ ಮಾರ್ಗದರ್ಶಕರಿಗೆ ತರಬೇತು ನೀಡಬಲ್ಲ ಸಂಸ್ಥೆಗಳೂ ಏರ್ಪಟ್ಟಿಲ್ಲ. ಆದ್ದರಿಂದ ಸದ್ಯಕ್ಕೆ ಆ ಯೋಜನೆಯನ್ನು ಮಾರ್ಪಡಿಸಿಕೊಂಡು ತಾತ್ಕಾಲಿಕ ವ್ಯವಸ್ಥೆಯೊಂದನ್ನು ಆಚರಣೆಗೆ ತರುವ ಯತ್ನ ಕೆಲವು ರಾಜ್ಯಗಳಲ್ಲಿ ಆರಂಭವಾಗಿದೆ. ಪ್ರತಿ 10-15 ಪ್ರೌಢಶಾಲೆಗಳಿಗೆ ಒಬ್ಬೊಬ್ಬರು ಮಾರ್ಗದರ್ಶಕನನ್ನು ನೇಮಿಸಿಕೊಂಡು ಸರದಿಯ ಪ್ರಕಾರ ಪ್ರತಿ ಶಾಲೆಯಲ್ಲೂ ಮಾರ್ಗದರ್ಶನ ನೀಡುವ ಕಾರ್ಯ ನಡೆಯುತ್ತಿದೆ. ಆಯಾ ರಾಜ್ಯದಲ್ಲಿ ಆರಂಭವಾಗಿರುವ ಮಾರ್ಗದರ್ಶನದ ಕಾರ್ಯಾಲಯ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಮಾರ್ಗದರ್ಶಕರಿಗೆ ಅಗತ್ಯವೆನಿಸುವ ತಾಂತ್ರಿಕ ಸಲಹೆ ಸಹಕಾರಗಳನ್ನು ಒದಗಿಸುತ್ತಿದೆ; ವಿವಿಧ ವೃತ್ತಿಗಳ ಬಗ್ಗೆ ಪರಿಶೀಲನೆ ನಡೆಸಿ, ವೃತ್ತಿವಿಶ್ಲೇಷಣವನ್ನು ಕೈಗೊಂಡು ಆಯಾ ವೃತ್ತಿಗೆ ಅಗತ್ಯವೆನಿಸುವ ಕೌಶಲ್ಯ, ಸಾಮಥರ್ಯ್‌, ಮನೋಭಾವ, ಚಿತ್ತವೃತ್ತಿ ಇತ್ಯಾದಿಗಳನ್ನು ನಿರ್ಧರಿಸುತ್ತಿದೆ; ಕಾರ್ಯಕರ್ತರಿಗೆ ಪ್ರಚಾರಪತ್ರ, ಕಿರುಹೊತ್ತಿಗೆ, ನಿಯತಕಾಲಿಕ ಪತ್ರಿಕೆ ಇತ್ಯಾದಿ ಪ್ರಕಟಣೆಗಳ ಮೂಲಕ ಆ ವಿವರಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ದೊರಕತಕ್ಕ ಉದ್ಯೋಗಾವಕಾಶಗಳ ಬಗ್ಗೆಯೂ ವಿವರಗಳನ್ನು ಪ್ರಕಟಿಸುತ್ತಿದೆ. ಈಚೆಗೆ ಪ್ರೌಢಶಾಲೆಯ ಎಲ್ಲ ಅಧ್ಯಾಪಕರೂ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನದಲ್ಲಿ ತಕ್ಕಮಟ್ಟಿನ ತರಬೇತು ಪಡೆಯುವ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ರಾಷ್ಟ್ರೀಯ ಉದ್ಯೋಗ ಸೇವಾ ಶಾಖೆಯ (ನ್ಯಾಷನಲ್ ಎಂಪ್ಲಾಯ್ಮೆಂಟ್ ಸರ್ವಿಸ್) ತಜ್ಞರೂ ಆ ಕಾರ್ಯದಲ್ಲಿ ನೆರವು ನೀಡುತ್ತಿದ್ದಾರೆ. ಈಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ದೀರ್ಘಾವಧಿಯ ತರಬೇತು ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸುವ ಯೋಜನೆಯೂ ಆರಂಭವಾಗಿದೆ. ಆದರೆ ಆ ಕಾರ್ಯಕ್ಕೆ ತಕ್ಕಷ್ಟು ಸಂಖ್ಯೆಯಲ್ಲಿ ತಜ್ಞರು ದೊರಕುತ್ತಿಲ್ಲವಾಗಿ ಯೋಜನೆ ಕುಂಟುತ್ತ ಸಾಗುತ್ತಿದೆ. ಸದ್ಯಕ್ಕೆ ರಾಜ್ಯದ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಮಾರ್ಗದರ್ಶನ ಕಾರ್ಯಾಲಯವೂ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್ (ಎನ್.ಸಿ.ಇ.ಆರ್.ಟಿ.) ಸಂಸ್ಥೆಯೂ ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುವ ಮತ್ತು ಉಪಕರಣಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದೆ. ಮಾರ್ಗದರ್ಶಕರಿಗೆ ಔದ್ಯೋಗಿಕ ಮಾರ್ಗದರ್ಶನದಲ್ಲಿ ಬಳಸುವ ಉಪಕರಣಗಳೂ ಆ ಕಾರ್ಯಕ್ಕೆ ಸಂಬಂಧಿಸಿದ ಪಾರಿಭಾಷಿಕ ಸಾಹಿತ್ಯವೂ ದೇಶೀಯ ಭಾಷೆಗಳಲ್ಲಿ ಇನ್ನು ಮೇಲೆ ಸೃಷ್ಟಿಯಾಗಿ ಪ್ರಕಟವಾಗಬೇಕು. ಸದ್ಯದಲ್ಲಿ ಮಾರ್ಗದರ್ಶಕರು ಬಳಸುತ್ತಿರುವ ಪರೀಕ್ಷಣ, ಪ್ರಶ್ನಾವಳಿ, ಆಸಕ್ತಿಸೂಚಿ, ಸಾಮಥರ್ಯ್‌ ಪರೀಕ್ಷಣ ಮತ್ತು ಇತರ ಸಾಹಿತ್ಯ-ಇವೆಲ್ಲ ಇಂಗ್ಲಿಷಿನಲ್ಲಿ ಅನ್ಯದೇಶಗಳಲ್ಲಿ ಪ್ರಕಟವಾಗಿದ್ದು, ಭಾರತೀಯ ಸನ್ನಿವೇಶಗಳಿಗೆ ಅಷ್ಟಾಗಿ ಸೂಕ್ತವಾಗಿಲ್ಲ. ಅವನ್ನೆಲ್ಲ ನಮ್ಮ ನಾಡಿನ ಜನಜೀವನ, ಸಾಮಾಜಿಕ ಪರಿಸ್ಥಿತಿ, ಉದ್ಯೋಗಗಳ ಸ್ವರೂಪ, ಉದ್ಯೋಗಾವಕಾಶ ಇತ್ಯಾದಿಗಳಿಗೆ ಸರಿಹೊಂದುವಂತೆ ಮಾರ್ಪಡಿಸಿಕೊಳ್ಳುವ ಕಾರ್ಯವೂ ನಡೆಯಬೇಕು. ಇಲ್ಲಿ ಈಚೆಗೆ ಹೊಸ ಹೊಸ ಉದ್ಯೋಗಗಳು ಆರಂಭವಾಗುತ್ತಿದೆ; ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಉದ್ಯೋಗಗಳಲ್ಲಿ ಇರುವ ಅವಕಾಶ, ದೊರಕುವ ಸಂಬಳ ಇತ್ಯಾದಿಗಳು, ಒಂದೊಂದು ಉದ್ಯೋಗಕ್ಕೂ ಅಗತ್ಯವೆನಿಸುವ ಸಾಮಾನ್ಯ ವಿದ್ಯಾರ್ಹತೆ, ವಿಶಿಷ್ಟ ತರಬೇತು, ಅಗತ್ಯ ಕೌಶಲ್ಯ, ಬುದ್ಧಿಶಕ್ತಿಯ ಮಟ್ಟ, ಮನೋಭಾವದ ಸ್ವರೂಪ, ಆ ಉದ್ಯೋಗಕ್ಕೆ ಸಿದ್ಧತೆ ನೀಡಲು ವ್ಯವಸ್ಥೆಗೊಳಿಸಿರುವ ತರಬೇತು ಸಂಸ್ಥೆಗಳು, ಉದ್ಯೋಗವನ್ನು ದೊರಕಿಸಿ ಕೊಡಲು ನೆರವಾಗುತ್ತಿರುವ ಸಂಸ್ಥೆಗಳು ಇತ್ಯಾದಿ ವಿವರಗಳನ್ನೂ ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಪ್ರಕಟಿಸಬೇಕು. ಆ ವಿಷಯವನ್ನು ಯುವಜನರಿಗೆ ಒದಗಿಸಲು ಉಪನ್ಯಾಸ, ಪ್ರದರ್ಶನ, ಪ್ರಸಾರ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸದ್ಯದಲ್ಲಿ ಅಲ್ಲಲ್ಲಿ ಏರ್ಪಟ್ಟಿರುವ ಉದ್ಯೋಗ ವಿನಿಮಯ ಕೇಂದ್ರಗಳೂ ಮಾರ್ಗದರ್ಶನ ಕಾರ್ಯಾಲಯಗಳೂ ರೇಡಿಯೋ ಪ್ರಸಾರ ಕೇಂದ್ರಗಳೂ ಅಧ್ಯಾಪಕರ ಕಾಲೇಜುಗಳೂ ಈ ಕಾರ್ಯವನ್ನು ಸ್ವಲ್ಪಮಟ್ಟಿಗೆ ನಿರ್ವಹಿಸುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ಈಗಾಗಲೇ ಕೇಂದ್ರದಲ್ಲೂ ರಾಜ್ಯಗಳಲ್ಲೂ ಆ ಕಾರ್ಯಕ್ಕಾಗಿ ಆರಂಭವಾಗಿರುವ ವಿವಿಧ ಸಂಸ್ಥೆಗಳಲ್ಲೂ ಕಾರ್ಯಾಲಯಗಳಲ್ಲೂ ಸಮಾಯೋಜನೆಯುಂಟು ಮಾಡಬೇಕು.

ಪ್ರೌಢಶಾಲೆಗಳಲ್ಲಿ ಮಾರ್ಗದರ್ಶನ ನೀಡುವುದರ ಜೊತೆಗೆ ಆ ಸೇವಾಸೌಲಭ್ಯದ ಅಂಗವಾಗಿ ಭಾಗಶಃ ಕಾಲದ ಉದ್ಯೋಗಗಳನ್ನು ಕೊಡಿಸುವ ವ್ಯವಸ್ಥೆಯನ್ನೂ ಕೈಗೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ತಾವು ಯಾವ ಕೆಲಸಕ್ಕೆ ಸೂಕ್ತರೆಂಬುದನ್ನು ಪ್ರಾಯೋಗಿಕವಾಗಿ ಅರಿತುಕೊಳ್ಳಬಹುದಾದ ಅವಕಾಶವನ್ನು ದೊರಕಿಸಿದಂತಾಗುತ್ತದೆ. ವಿಶ್ವವಿದ್ಯಾನಿಲಯ, ಕಾಲೇಜು, ತಾಂತ್ರಿಕ ಮತ್ತು ವೃತ್ತಿಶಿಕ್ಷಣ ಸಂಸ್ಥೆಗಳು ಇತ್ಯಾದಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಗತಕ್ಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಇನ್ನೂ ಹೆಚ್ಚಿನ ಅಗತ್ಯ. ಪ್ರತಿ ದೊಡ್ಡ ಶಿಕ್ಷಣ ಸಂಸ್ಥೆಗೂ ಒಬ್ಬೊಬ್ಬ ಮಾರ್ಗದರ್ಶನ ಪ್ರವೀಣನನ್ನು ನೇಮಿಸಿಕೊಳ್ಳುವ ಅಗತ್ಯವನ್ನು ಕೊಠಾರಿ ಶಿಕ್ಷಣ ಆಯೋಗ ಸೂಚಿಸಿದೆ. ಹೇಗೊ ಹಣವನ್ನು ಒದಗಿಸಿಕೊಂಡರೂ ಆ ಜಾಗಕ್ಕೆ ತಕ್ಕ ತಜ್ಞರು ಸಿಕ್ಕುವುದು ದುರ್ಲಭವಾಗುತ್ತಿದೆ. ಈ ಕೊರತೆಯನ್ನು ನಿವಾರಿಸಲು ತಕ್ಕಷ್ಟು ಸೌಲಭ್ಯವುಳ್ಳ ಯಾವುದಾದರೂ ವಿಶ್ವವಿದ್ಯಾನಿಲಯ ಪದವಿ ಮಟ್ಟದಲ್ಲಿ ಇದನ್ನೊಂದು ಐಚ್ಛಿಕ ವಿಷಯವನ್ನಾಗಿ ಗೊತ್ತುಮಾಡಬಹುದು. ಆ ಮೂಲಕ ಕೆಲವೇ ವರ್ಷಗಳಲ್ಲಿ ಆ ವಿಷಯವನ್ನು ಇತರ ವಿಶ್ವವಿದ್ಯಾನಿಲಯಗಳೂ ಆರಂಭಿಸಲು ಸಹಾಯವಾಗುತ್ತದೆ; ಜೊತೆಗೆ, ನಮ್ಮ ಪ್ರೌಢಶಾಲೆಗಳಿಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಮಾರ್ಗದರ್ಶನದಲ್ಲಿ ತರಬೇತು ತಜ್ಞರೂ ದೊರಕುವಂತಾಗುತ್ತದೆ. 

ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ ಉದ್ಯೋಗಾವಕಾಶ ಸೇವಾಶಾಖೆಯ ಉದ್ಯೋಗ, ಸಮಾಚಾರ ಮತ್ತು ಮಾರ್ಗದರ್ಶನ ಕಾರ್ಯಾಲಯಗಳೂ ವಿದ್ಯಾರ್ಥಿ ಸಲಹಾ ಮಂಡಲಿಗಳೂ ಸ್ವಲ್ಪಮಟ್ಟಿಗೆ ಔದ್ಯೋಗಿಕ ಮಾರ್ಗದರ್ಶನವನ್ನು ನಿರ್ವಹಿಸುತ್ತವೆ. ಅವು ಬೇರೆ ಬೇರೆ ರಾಜ್ಯಗಳಲ್ಲಿರುವ ಉದ್ಯೋಗಾವಕಾಶವನ್ನು ಸಂಗ್ರಹಿಸಿ, ಪ್ರಕಟಿಸಿ ಸೂಕ್ತವಾದ ಅಭ್ಯರ್ಥಿಗಳ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಿಸಿದವರಿಗೆ ಕಳಿಸಿ ಕೆಲಸ ದೊರಕಿಸಲು ಸಹಾಯ ಮಾಡುತ್ತಿವೆ. ಅಲ್ಲದೆ, ಆಗಾಗ ಬೇರೆ ಬೇರೆ ಉದ್ಯೋಗಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಿ, ಉದ್ಯೋಗಾರ್ಥಿಗಳಿಗೆ ವಿವರಗಳನ್ನೂ ಮಾರ್ಗದರ್ಶನವನ್ನೂ ಒದಗಿಸುತ್ತಿವೆ. ಬೇರೆ ಬೇರೆ ಉದ್ಯೋಗಿಗಳಿಗೆ ಬೇಕಾದ ತರಬೇತು, ಅವನ್ನು ಒದಗಿಸುವ ಸಂಸ್ಥೆಗಳು, ಅದಕ್ಕಾಗಿ ದೊರೆಯುವ ವಿದ್ಯಾರ್ಥಿ ವೇತನ, ಉಮೇದುವಾರಿ ಶಿಕ್ಷಣ ಇತ್ಯಾದಿಗಳ ಬಗ್ಗೆಯೂ ತಜ್ಞರಿಂದ ಭಾಷಣಗಳನ್ನು ಏರ್ಪಡಿಸುತ್ತವೆ. ಕೇಂದ್ರ-ಸಚಿವಾಲಯ ಮೊದಲು, ಪರದೇಶಗಳಲ್ಲಿ ಶಿಕ್ಷಣಕ್ಕಾಗಿ ಇರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಈ ವಿದ್ಯಾರ್ಥಿ ಸಲಹಾ ಸೇವಾ ಕಚೇರಿಗಳನ್ನು (ಸ್ಟೂಡೆಂಟ್ಸ್‌ ಅಡ್ವೈಸರಿ ಬ್ಯೂರೊ) ಆರಂಭಿಸಿತು. ಈಗ ಅವು ಭಾರತದಲ್ಲಿ ಸಾಮಾನ್ಯ ಮತ್ತು ವೃತ್ತಿ ಶಿಕ್ಷಣಗಳಲ್ಲಿ ಇರತಕ್ಕ ಸೌಲಭ್ಯಗಳನ್ನು ಕುರಿತ ವಿವರಗಳನ್ನೂ ಒದಗಿಸುತ್ತಿವೆ. ಮೇಲಿನ ಎರಡು ವಿಧವಾದ ಕಾರ್ಯಾಲಯಗಳೂ ಒಂದಕ್ಕೊಂದಕ್ಕೆ ಪುರಕವಾಗಿ ಕೆಲಸ ಮಾಡುತ್ತಿವೆ. ಆದ್ದರಿಂದ ಅವೆರಡನ್ನೂ ಒಟ್ಟುಗೂಡಿಸಿ, ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಗಳೆರಡನ್ನೂ ತಮ್ಮ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳುವ ಯತ್ನ ನಡೆಯುತ್ತಿದೆ.

ವ್ಯಕ್ತಿ ತಾನು ಯಶಸ್ಸನ್ನು ಸಾಧಿಸಬಲ್ಲ, ತನ್ನ ಮನಸ್ಸಿಗೆ ತೃಪ್ತಿಯಾಗಿ ಜೀವನದಲ್ಲಿ ನೆಮ್ಮದಿಯನ್ನು ದೊರಕಿಸುವಂಥ ಉದ್ಯೋಗವನ್ನು ಅವಲಂಬಿಸುವುದು ರಾಷ್ಟ್ರದ ಆರ್ಥಿಕ ಪ್ರಗತಿಗೆ ಅಗತ್ಯವೆನಿಸುತ್ತದೆ. ಹಾಗೆ ವ್ಯಕ್ತಿ ಸೂಕ್ತ ಉದ್ಯೋಗವನ್ನು ಆರಿಸಿಕೊಳ್ಳುವ ಕಾರ್ಯದಲ್ಲಿ ಔದ್ಯೋಗಿಕ ಮಾರ್ಗದರ್ಶನ ಒಳ್ಳೆಯ ನೆರವನ್ನು ಪರಿಣಮಿಸಬಲ್ಲದು (ನೋಡಿ- ಉದ್ಯೋಗ-ವಿನಿಮಯ-ವ್ಯವಸ್ಥೆ).	(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ